ಪ್ರತಾಪಸಿಂಹ, ರಾಣಾ - 
ಮೇವಾಡದ ದೊರೆ (1572-1597) ಬಪ್ಪರಾವುಲ ವಂಶಕ್ಕೆ ಸೇರಿದವನು. ರಾಣಾ ಉದಯ ಸಿಂಹನ ಮಗ. ಮಹಾ ವೀರ, ದೇಶಪ್ರೇಮಿ, ಮೇವಾಡದ ಸ್ವಾತಂತ್ರ್ಯಕ್ಕಾಗಿ ಅಕ್ಬರನನ್ನೆದುರಿಸಿ ಹೋರಾಡಿದವನು. 

ಅಕ್ಬರ್ ತನ್ನ ಪ್ರಚಂಡ ಸೇನಾಬಲದೊಂದಿಗೆ ರಾಜಸ್ಥಾನದ ಮೇಲೆ ಬಿರುಗಾಳಿಯಂತೆ ದಾಳಿಯಿಟ್ಟು ಮರವಾರ, ಅಂಬರ್, ಬಿಕನೀರ್ ಮತ್ತು ಟೋಂದಿ ರಾಜ್ಯಗಳನ್ನು ಗೆದ್ದು ಮೇವಾರದ ಕಡೆ ತಿರುಗಿದ. ಅವನು 1567ರಲ್ಲಿ ಚಿತ್ತೂರನ್ನು ಮುತ್ತಿದ. ಉದಯ ಸಿಂಹ ಅವನ ಮುಂದೆ ನಿಲ್ಲಲಾರದೆ ಓಡಿಹೋಗಿ ಕಮಲ ಮೇರುವಿನಲ್ಲಿ ನಿಂತು ಗೋಗುಂಡ ಕೋಟೆಯನ್ನು ಬಲಪಡಿಸಿದ. ಅವನ ನೆಚ್ಚಿನ ಸಂಗಡಿಗರಾದ ಜಯಮಲ್ಲ ಮತ್ತು ಪಟ್ಟರು ಮಡಿದರು. ಚಿತ್ತೂರು ಕೋಟೆ ಅಕ್ಬರನ ವಶವಾಯಿತು. ಅಲ್ಲಿಯ ದೇವಿ ಮಂದಿರದಲ್ಲಿದ್ದ ಬ್ರಹದ್‍ಗಾತ್ರದ ನಗಾರಿಯನ್ನು ಅಕ್ಬರ್ ಅಗ್ರಕ್ಕೆ ಸಾಗಿಸಿದ.

ಉದಯಸಿಂಹ 1572ರಲ್ಲಿ ಮಡಿದಾಗ ಪ್ರತಾಪ ಸಿಂಹ ಕಮಲಮೇರುವಿನಲ್ಲಿ ಪಟ್ಟಕ್ಕೆ ಬಂದು ತಂದೆಯ ಸ್ವಾತಂತ್ರ್ಯ ಹೋರಾಟವನ್ನು ಮುಂದುವರಿಸಿದ. ರಾಜಸ್ಥಾನದ ಸಣ್ಣದೊಡ್ಡ ದೊರೆಗಳು ಅಕ್ಬರನ ಪ್ರಚಂಡ ಸೈನ್ಯದ ಮುಂದೆ ನಿಲ್ಲಲಾರದೆ ಒಬ್ಬೊಬ್ಬರಾಗಿ ಸೋತು ಶರಣು ಬಂದಿದ್ದರು. ಆದರೆ ಪ್ರತಾಪ ಸಿಂಹ ಸ್ವಾತಂತ್ರ್ಯವನ್ನು ಕಳೆದುಕೊಂಡು ಮೊಗಲರ ಸ್ನೇಹಹಸ್ತವನ್ನು ಸ್ವೀಕರಿಸಲು ಸಿದ್ಧನಿರಲಿಲ್ಲ. ಉಳಿದ ರಾಜಪುತ್ರರಂತೆ ಮೊಗಲರೊಡನೆ ದೇಹ ಸಂಬಂಧವನ್ನು ಬೆಳೆಸಿ ಅವರ ಊಳಿಗ ಮಾಡುವ ಆಸೆಗೆ ಬಲಿಯಾಗಲಿಲ್ಲ. ತಾನು ಒಪ್ಪ ರಾವುಲನ ವಂಶದ ಕುಡಿ, ಮತ್ರ್ಯಲೋಕದ ಮಾನವನಿಗೆ ತಲೆಬಾಗಲಾರೆ-ಎಂಬ ದೃಢಸಂಕಲ್ಪ ಅವನದು.

ಪ್ರತಾಪ ಸಿಂಹನೊಂದಿಗೆ ಯುದ್ದಮಾಡಲು ಅಂಬರಿನ ರಾಜ ಮಾನಸಿಂಹ ಮತ್ತು ಅಸಫ್‍ಖಾನರ ನೇತೃತ್ವದಲ್ಲಿ ಬಂದ ಮೊಗಲ್ ಸೈನ್ಯವನ್ನು ಗೋಗುಂಡ ಕೋಟೆಗೆ 32 ಕಿ.ಮೀ. ದೂರದಲ್ಲಿದ್ದ ಹಳದಿಘಾಟ್‍ನಲ್ಲಿ ಪ್ರತಾಪ ಸಿಂಹ ಎದುರಿಸಿದ. ಎರಡೂ ಪಡೆಗಳ ಸೈನ್ಯಗಳ ನಡುವೆ ಕದನ ನಡೆದು ಪ್ರತಾಪ ಸಿಂಹ ಸಂಪೂರ್ಣವಾಗಿ ಸೋತ. ಅವನು ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಲು ತೀರ್ಮಾನಿಸಿ, ಶತ್ರುಗಳು ಬಂದು ತನ್ನನ್ನು ಕೈಸೆರೆ ಹಿಡಿಯುವ ಮೊದಲೇ ಕುದುರೆಯನ್ನೇರಿ ಅರಾವಳಿ ಗುಡ್ಡಗಳಿಗೆ ಹೋಗಿ ತಲೆ ತಪ್ಪಿಸಿಕೊಂಡ. ಅವನನ್ನು ಉಳಿಸುವ ಸಲುವಾಗಿ ಅವನ ನೆಚ್ಚಿನ ಸೇವಕ ಜಾಲಮುಖಂಡನೊಬ್ಬ ಪ್ರತಾಪ ಸಿಂಹನಂತೆ ವೇಶ ಧರಿಸಿ, ಸತ್ತಿಗೆ ಹಿಡಿದು ಶತ್ರುಗಳಿಗೆ ಸೆರೆಸಿಕ್ಕಿ ಅವರಿಂದ ಹತನಾದ. ಅರಾವಳಿ ಗುಡ್ಡಗಾಡನ್ನು ಸೇರಿದ ಪ್ರತಾಪ ಸಿಂಹ ಚಿತ್ತೂರು ಮತ್ತೆ ತನ್ನ ವಶವಾಗುವವರೆಗೆ ಹಾಸಿಗೆಯ ಮೇಲೆ ಮಲಗುವುದಿಲ್ಲವೆಂದೂ ಬೆಳ್ಳಿ ಬಂಗಾರದ ತಟ್ಟೆಯಲ್ಲಿ ಊಟ ಮಾಡುವುದಿಲ್ಲವೆಂದೂ ಪ್ರತಿಜ್ಞೆ ಮಾಡಿ, ಹುಲ್ಲಿನ ಹಾಸಿಗೆಯ ಮೇಲೆ ಮಲಗಿ ಗೆಡ್ಡೆ ಗೆಣಸುಗಳನ್ನು ತಿಂದು ಕಾಲಯಾಪನ ಮಾಡಿದ. ಮೊಗಲ್ ಸೈನ್ಯ ಅವನನ್ನು ಬೆನ್ನಟ್ಟುತ್ತಲೇ ಇತ್ತು. ಎಲ್ಲೆಲ್ಲೂ ಶತ್ರುಗಳ ಸೈನಿಕರೂ ಮೊಗಲರ ಗೂಢಚಾರರೂ ತುಂಬಿದ್ದರು. ಅವರಿಂದ ತಪ್ಪಿಸಿಕೊಳ್ಳಲು ಪ್ರತಾಪ ಸಿಂಹ ಹೆಂಡತಿಮಕ್ಕಳೊಂದಿಗೆ ಗುಡ್ಡದಿಂದ ಗುಡ್ಡಕ್ಕೆ, ಕಾಡಿನಿಂದ ಕಾಡಿಗೆ ಓಡಿಹೋಗಬೇಕಾಯಿತು. ಎಷ್ಟೋ ಬಾರಿ ತನ್ನ ಮಗನನ್ನು, ಬುಟ್ಟಿಯಲ್ಲಿ ಕೂಡಿಸಿ ಶತ್ರುಗಳಿಂದ ಪಾರುಮಾಡಬೇಕಾಯಿತು. ಒಮ್ಮೆ ಅವನನ್ನು ಹಿಡಿಯಲು ಬಂದ ಗೂಢಚಾರನೊಬ್ಬ ಪ್ರತಾಪ ಸಿಂಹನ ರಿಕ್ತಾವಸ್ಥೆಯನ್ನು ನೋಡಿ ಕಂಬನಿ ಮಿಡಿದನೆಂದು ಹೇಳಲಾಗಿದೆ.

ಪ್ರತಾಪ ಸಿಂಹ ಹೀಗೆ ಅನೇಕ ಕಷ್ಟಕಾರ್ಪಣ್ಯಗಳನ್ನು ಅನುಭವಿಸಿ ಕೆಲವು ಪ್ರದೇಶಗಳನ್ನು ವಶಪಡಿಸಿಕೊಂಡನಾದರೂ ಅವನ ಹೋರಾಟ ವ್ಯರ್ಥಸಾಹಸವಾಯಿತು. ಅವನು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಲೇ ತಾನು ಆರಂಭಿಸಿದ ಕೆಲಸವನ್ನು ಸಾಧಿಸುವ ಹೊಣೆಗಾರಿಕೆಯನ್ನು ಮಗ ಅಮರ ಸಿಂಹನಿಗೆ ಒಪ್ಪಿಸಿ 57ನೆಯ ವಯಸ್ಸಿನಲ್ಲಿ 1597ರ ಜನವರಿ 19 ರಂದು ತೀರಿಕೊಂಡ. ಮೊಗಲರ ಆಕ್ರಮಣದ ವಿರುದ್ಧ ಕೊನೆಯವರೆಗೂ ಹೋರಾಟ ನಡೆಸಿದ ರಜಪೂತ ದೊರೆ ಅವನೊಬ್ಬನೇ. ಅಮರಸಿಂಹ 1614ರಲ್ಲಿ ಚಕ್ರವರ್ತಿ ಜಹಾಂಗೀರನಿಗೆ ಮಣಿಯಬೇಕಾಯಿತು. 			  
(ಕೆ.ಎಸ್.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ